Thursday, August 6, 2009

ನವರಸಗಳು...



ಶಾಸ್ತ್ರೀಯ ನೃತ್ಯ ಪಟು ಕುಮಾರಿ ಸಹಿತಿ ಯವರು, ಹೈದರಾಬಾದ್ ನಲ್ಲಿ ನಡೆದ ಅವರ ಮೊದಲನೆ ಕುಚುಪುಡಿ ನೃತ್ಯ ಪ್ರದರ್ಶನದಲ್ಲಿ "ನವರಸ"ಗಳನ್ನು ಬಿಂಬಿಸುತ್ತಿರುವ ದೃಶ್ಯಗಳು.
ಎಡದಿಂದ ಬಲಕ್ಕೆ - ಶೃಂಗಾರ (erotic), ಹಾಸ್ಯ (humorous), ಕರುಣಾ (pathetic), ರೌದ್ರ (terrible), ವೀರ (heroic), ಭಯನ (fearful), ಭೀಭತ್ಸ್ಯ (odious), ಅದ್ಭುತ (wonderous) ಮತ್ತು ಶಾಂತ (peaceful)

ಕೃಪೆ - deccan herald news paper dated 4th August 2009

Tuesday, June 30, 2009

ಇರುವುದೆಲ್ಲವ ಬಿಟ್ಟು ...


ವಿದೇಶಕ್ಕೆ ಹೊಗುವುದು ಅದೊಂಥರಾ ಮಧುರ ಯಾತನೆ!


ನಾನು ಮೊದಲನೆ ಸಾರಿ ವಿದೇಶಕ್ಕೆ ಹೋಗಿದ್ದು ಸುಮಾರು ಎರಡು ವರುಷಗಳ ಹಿಂದೆ. ಅದಕ್ಕೂ ಮೊದಲು ವಿದೇಶಕ್ಕೆ ಹೋಗಬೇಕೆಂಬ ಆಸೆ ಇತ್ತಾದರೂ ಅವಕಾಶ ಬಂದಿದ್ದು ಆಕಸ್ಮಿಕವಾಗಿ. ಹೀಗಾಗಿ ಅಲ್ಲಿಗೆ ಹೋಗುವ ಮೊದಲು ಬಹು ಉತ್ಸಾಹವಾಗಿತ್ತು. ಜೊತೆಗೆ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ಕಂಪೆನಿಯವರು ಒಪ್ಪಿದ್ದರಿಂದ ತುಂಬಾ ಸಂತೋಷವೇ ಆಗಿತ್ತು. ಆಗ ಹೋಗಿದ್ದು ಅಮೇರಿಕಾದ San Francisco ಹತ್ತಿರದ ಒಂದು ಊರಿಗೆ. ಹೋದ ಕೆಲವೇ ದಿನಗಳಲ್ಲಿ ನನ್ನ ಉತ್ಸಾಹ ಇಳಿದು ಹೋಗಿತ್ತು. ಅದರ ಮೊದಲನೆ ಕಾರಣವೆಂದರೆ ಆಗ ನನಗೆ ಕಾರ್ ಡ್ರೈವಿಂಗ್ ಬರದೆ ಇದ್ದದ್ದು. ಮನೆಗೆ ತರಕಾರಿ ತರಲೂ ಕೂಡ ಕಾರ್ ತೆಗೆದುಕೊಂಡು ಹೋಗಬೇಕಾದ್ದರಿಂದ ನನ್ನ ಸಹೋದ್ಯೋಗಿಗಳ ಮೇಲೆ ಅವಲಂಬನೆ ಜಾಸ್ತಿ ಆಗತೊಡಗಿತ್ತು. ಅಲ್ಲದೆ ಹೊರಗಡೆ ಅನೇಕ ತಾಣಗಳನ್ನು ಸುತ್ತಾಡಬೇಕೆಂದಿದ್ದ ನನಗೆ ಕೈ ಕಟ್ಟಿ ಹಾಕಿದ ಹಾಗಾಗಿತ್ತು. ಕಂಪನಿಯಲ್ಲಿ ವಿಪರೀತ ಕೆಲಸ ಬೇರೆ. ಹೀಗಾಗ ಮೊದಲ ಎರಡು ತಿಂಗಳಲ್ಲಿಯೇ ಅಮೇರಿಕಾ ನನಗೆ ಸಾಕಾಗಿ ಹೋಗಿತ್ತು. ಅಲ್ಲದೆ ಕೊನೆಯ ಒಂದು ತಿಂಗಳು ನನ್ನ ಹೆಂಡತಿ ತಿರುಗಿ ಭಾರತಕ್ಕೆ ಬಂದಿದ್ದರಿಂದ ಏಕಾಂಗಿತನದಿಂದ ಸಾಕು ಸಾಕಾಗಿ ಹೋಗಿತ್ತು. ಯಾವಾಗ ಮರಳಿ ಬೆಂಗಳೂರಿಗೆ ಬಂದೆನೋ ಎನ್ನುವಂತಾಗಿತ್ತು. ಕೊನೆಗೂ ಆ ದಿವಸ ಬಂದೆ ಬಿಟ್ಟಿತ್ತು. ಅವತ್ತು San Francisco ಏರ್ಪೋರ್ಟ್ ಅಲ್ಲಿ ಬೆಂಗಳೂರಿಗೆ ವಿಮಾನ ಏರಿದಾಗ ಹೋದ ಜೀವ ಮರಳಿ ಬಂದತ್ತಗಿತ್ತು. ಆದರೆ ಬೆಂಗಳೂರಿಗೆ ಬಂದ ಕೆಲವೇ ಘಂಟೆಗಳಲ್ಲಿ ನನ್ನ ದ್ವಂಧ್ವ ಶುರುವಾಗಿತ್ತು. ಏರ್ಪೋರ್ಟ್ ಅಲ್ಲಿ ದುಡ್ಡಿಗೋಸ್ಕರ ಜನರನ್ನ ವಿನಾಕಾರಣ ಹಿಡಿದು ನಿಲ್ಲಿಸುತ್ತಿರುವ ಕಸ್ಟಮ್ ಅಧಿಕಾರಿಗಳು. ಹೊರಗೆ ಬಂದ ತಕ್ಷಣ ದುಡ್ಡು ಕೀಳಲು ಹವಣಿಸುತ್ತಿರುವ ಟ್ಯಾಕ್ಸಿ ಡ್ರೈವರ್ ಗಳು. ರಸ್ತೆ ಮೇಲೆ ಮನಬಂದಂತೆ ಹೋಗುತ್ತಿರುವ ವಾಹನಗಳು... ಮೊದಲನೆ ಸಲ ನಾನು ಇಲ್ಲಿಯ ಜೀವನವನ್ನು ಅಲ್ಲಿಯ ಜೀವನದ ಜೊತೆ ಹೋಲಿಸತೊಡಗಿದ್ದೆ. ಇಲ್ಲಿನ ಜೀವನದ ಬಗ್ಗೆ ಏನೋ ಒಂಥರಾ ಬೇಸರ ಶುರುವಾಗಿತ್ತು. ಆದರೆ ಬೇರೆ ದಾರಿಯೇ ಇರಲಿಲ್ಲ. ಕೆಲವು ದಿವಸಗಳಲ್ಲಿ ಎಲ್ಲಾ ಮೊದಲಿನಂತೆಯೇ ಆಗ ತೊಡಗಿತ್ತು. ಆದರೆ ವಿದೇಶದ ಬಗ್ಗೆ ಒಂದು ರೀತಿಯ ಮೋಹಕತೆಯೂ ಶುರುವಾಗಿತ್ತು. ಅಲ್ಲದೆ ನಾನು ಅಮೇರಿಕೆಗೆ ಹೋಗಿದ್ದು ಕೇವಲ ಮೂರೂ ತಿಂಗಳೇ ಆದರು ಅಲ್ಲಿ ನನಗೆ ಸಾಕಷ್ಟು ಹಣ ಉಳಿತಾಯವಾಗಿತ್ತು. ಹೀಗಾಗಿ ಮತ್ತೆ ವಿದೇಶಕ್ಕೆ ಹೋಗಬೇಕೆನ್ನುವ ಮೋಹ ಪಾಶದಲ್ಲಿ ನನಗೆ ತಿಳಿಯದೆ ನಾನು ಸಿಲುಕಿ ಹೋಗಿದ್ದೆ. ಆಗಲೆ ನನಗೆ "ತ್ರಿಶಂಕು" ಸ್ಥಿತಿಯ ಮೊದಲ ಅನುಭವವಾಗಿದ್ದು!


ನನ್ನ ಕಂಪೆನಿಯವರು ನನ್ನನ್ನು ಮತ್ತೆ ಅಲ್ಲಿಗೆ ಹೋಗಲು ಕರೆಯುತ್ತಿದ್ದರೂ ನನಗೆ ಸಾಕಷ್ಟು ಅಡಚಣೆಗಳಿದ್ದವು. ನನ್ನ ಹೆಂಡತಿಗೆ ಮತ್ತೆ ಮತ್ತೆ ಅವಳ ಕಂಪೆನಿಯಿಂದ ರಜೆ ಸಿಗುವ ಅವಕಾಶವಿರಲಿಲ್ಲ. ಅಲ್ಲದೆ ಅವಳನ್ನು ಇಲ್ಲಿ ಒಬ್ಬಳನ್ನೇ ಬಿಟ್ಟು ಹೋಗುವುದು ದೊಡ್ಡ ಸಮಸ್ಯೆಯೇ ಅಗಿತ್ತು. ಹೀಗಾಗಿ ನಂತರ ಸುಮಾರು ದಿನಗಳವರೆಗೆ ನಾನು ಮತ್ತೆ ವಿದೇಶಕ್ಕೆ ಹೊಗಲಿಲ್ಲ. ಆದರೆ ಅದರ ಮೋಹ ಒಳಗೊಳಗೆ ನನ್ನನ್ನು ಸೆಳೆಯುತ್ತಿತ್ತು. ಈ ಆಕರ್ಷಣೆಯಲ್ಲಿ, ಸ್ವಲ್ಪವೇ ಸಮಯದಲ್ಲಿ ಸುಮಾರು ದುಡ್ಡು ಮಾಡಬಹುದು ಎಂಬ ಆಸೆಯೂ ಪ್ರಬಲವಾಗಿ ಸೇರಿಕೊಂಡಿತ್ತು. ಹೀಗೆ ಸುಮಾರು ದಿನಗಳ ನಂತರ ಮತ್ತೆ ವಿದೇಶಕ್ಕೆ ಹೊಗಲು ಅವಕಾಶವನ್ನು ಗಿಟ್ಟಿಸಿಕೊಂಡದ್ದಾಯ್ತು.


ಈ ಬಾರಿಯೂ ಹೊದದ್ದು ಅಮೆರಿಕಾದಲ್ಲಿನ ಅದೇ ಊರಿಗೆ. ಆದರೆ ಈ ಸಲ ಹೆಂಡತಿಯನ್ನು ಬಿಟ್ಟು ಒಬ್ಬನೇ ಹೊಗಿದ್ದೆ. ಹೋದ ಒಂದೆರಡು ದಿನಗಳಲ್ಲಿಯೇ ಮತ್ತೆ ಮನೆಯ ನೆನಪಾಗತೊಡಗಿತ್ತು. ಒಂಟಿತನ ಕಾಡತೊಡಗಿತ್ತು. ಒಂದು ವಾರದಲ್ಲಿ ಅದು ಹೇಗೋ ಹೊಂದುಕೊಂಡಿದ್ದೆ. ಆದರೆ ಜಾಸ್ತಿ ದಿವಸ ಇರಲಾಗಲಿಲ್ಲ. ಮೂರು ತಿಂಗಳಿಗೆ ಎಂದು ಹೋದವನು, ಎರಡೇ ತಿಂಗಳಿಗೆ ತಿರುಗಿ ಬಂದು ಬಿಟ್ಟೆ. ಬಂದ ಕೂಡಲೇ ಮತ್ತೆ ಶುರುವಾಗಿತ್ತು ತಳಮಳ. ಮತ್ತೆ ಒಂದು ವಾರದ ಯಾತನೆ. ಇಲ್ಲಿನ ಜನ ಜೀವನದ ಬಗ್ಗೆ ಏನೊ ಒಂಥರ ಬೇಸರ. ಜೊತೆಗೆ, ಇಲ್ಲಿಯೂ ಅಲ್ಲಿಯ ಹಾಗೆ ಇದ್ದರೆ ಎಷ್ಟು ಚೆನ್ನ, ಎನ್ನುವ ಆಶೆ ಜೊತೆ, ಇದರ ಬಗ್ಗೆ ಏನೂ ಮಾಡಲಾಗುವುದಿಲ್ಲವಲ್ಲ ಎಂಬ ಅಸಹಾಯಕತೆ ಮತ್ತು ನಿರಾಶೆ.


ಹೇಗೊ ಹೊಂದುಕೊಂಡು ಮತ್ತೆ ಇಲ್ಲಿಯ ದಿನಚರಿಯಲ್ಲಿ ಒಂದಾಗಿ ಹೊಗಿದ್ದೆ - ಕಳೆದ ಮೂರು ತಿಂಗಳಿನ ವರೆಗೆ!
ಎಪ್ರಿಲ್ ನಲ್ಲಿ ನನ್ನ MS ಕೋರ್ಸ್ ನ ಮೊದಲನೆ ಸೆಮಿಸ್ಟರ್ ಮುಗಿದಿತ್ತು. ನಂತರ ಆಗಷ್ಟ್ ವರೆಗೆ ಬೇರೆ ಯಾವುದೇ commitment ಗಳು ಇರಲಿಲ್ಲ. ಹೀಗಾಗಿ ಮತ್ತೆ ವಿದೇಶಕ್ಕೆ ಒಂದು ಸುತ್ತು ಹೋಗಿಬರಬೇಕೆಂಬ ಆಸೆ ಹೆಚ್ಚಾಗತೊಡಗಿತ್ತು. ಅದೇ ಸಮಯಕ್ಕೆ ಕಂಪನಿಯಿಂದ ಲಂಡನ್ ಗೆ ಹೋಗಬೇಕಾದ ಅವಕಾಶ ವದಗಿ ಬಂತು. ಸರಿ, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿದ್ದಾಯ್ತು. swine flue ಬಗ್ಗೆ ನನಗೇ ಒಳಗೊಳಗೆ ಭಯ ಇದ್ದರೂ, ಅದರ ಬಗ್ಗೆ ಮನೆಯವರಿಗೆಲ್ಲ ಏನೊ ಒಂದು ಸಮಜಾಯಿಸಿ ಕೊಟ್ಟದ್ದಾಯ್ತು. ಅಂತು ಸುಮಾರು ಒಂದು ತಿಂಗಳ ಹಿಂದೆ ಲಂಡನ್ ಗೆ ಹೋಗಿ ಸೇರಿದ್ದೂ ಅಯ್ತು. ಆದರೆ ಹೋದ ಮರುದಿನವೇ ಮತ್ತೆ ಕಾಡತೊಡಗಿತ್ತು - ಏಕಾಂಗಿತನ. ಬರಬಾರದಿತ್ತೇನೊ ಎಂಬ ಹತಾಶೆ.



ಹೋಗಿದ್ದು ಮೂರು ತಿಂಗಳು ಇರುವುದಕ್ಕೋಸ್ಕರ. ಆದರೆ ಈ ಸಲ, ನನ್ನ home sickness ಎಷ್ಟಾಗಿತ್ತು ಎಂದರೆ, ಹೋದ ಒಂದು ವಾರದೊಳಗೇ, ಎನೋ ಒಂದು ರೀತಿಯಲ್ಲಿ ಆರೊಗ್ಯ ಹದಗೆಡತೊಡಗಿತ್ತು. ಇನ್ನು ಇರುವುದು ಸಾದ್ಯವೇ ಇಲ್ಲವೇನೊ ಎನ್ನುವಷ್ಟು ಏಕಾಂಗಿತನ ಕಾಡತೊಡಗಿತ್ತು. ಹೀಗಾಗಿ ಮತ್ತೆ ನನ್ನ ವಾಸವನ್ನು ಒಂದೇ ತಿಂಗಳಿಗಿ ಮೊಟಕುಗೊಳಿಸಿ ಬೆಂಗಳೂರಿಗೆ ಮರಳಿ ಬಂದು ಬಿಟ್ಟೆ. ಬಂದು ಒಂದು ವಾರವಾಗಿದೆ. ಮತ್ತೆ ಶುರುವಾಗಿದೆ ಮೊದಲಿನ ದ್ವಂಧ್ವ...


ಛೆ! ಪೌಂಡ್ ಬೆಲೆ ಏರುತ್ತಿದೆ. ಹೇಗಾದರೂ ಮಾಡಿ ಅಲ್ಲೆ ಇದ್ದಿದ್ದರೆ ಸುಮಾರು ದುಡ್ಡು ಉಳಿಸಬಹುದಿತ್ತು. ನಮ್ಮ ಜನ ಹೀಗ್ಯಾಕ್ ಆಡ್ತಾರೋ. ಬೆಂಗಳೂರು ಇಷ್ಟು ಚೆನ್ನಾಗಿದೆ, ಜನ ಇದನ್ನ ಹಾಳು ಮಾಡ್ತಾ ಇದರೆ. ಬಟ್, ಏನ್ ಮಾಡೊಕಾಗುತ್ತೆ?... anyways, ಮತ್ತೆ ಇಲ್ಲಿನ ಜೀವನಕ್ಕೆ ಹೊಂದುಕೊಳ್ಳುತ್ತಾ ಇದ್ದೇನೆ. ಸದ್ಯಕ್ಕೆ ವಿದೇಶಕ್ಕೆ ಹೊಗುವುದು ಅನುಮಾನವಾದರೂ, ಹೊಗಬೇಕೆಂಬ ಆಸೆ ಮಾತ್ರ ಮಾಯವಾಗಿಲ್ಲ...ಇದಕ್ಕೆ ಇರಬೇಕು, ಕವಿಗಳು ಹೇಳಿದ್ದು, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ..." ಅಂತ ಹೇಳಿದ್ದು...


ನಿನ್ನೆ ಅಮೇರಿಕದಲ್ಲಿ ಕಳೆದ ಎರಡು ವರ್ಷಗಳಿಂದ ಇರುವ ಗೆಳೆಯನೊಬ್ಬನ ಹತ್ತಿರ ಮಾತಾಡುತಿದ್ದೆ. ಅವನು ಹೇಳುತ್ತಿದ್ದ, ಇಲ್ಲಿಯವರೆಗೆ ಸುಮಾರು ಹದಿನೈದು ಇಪ್ಪತ್ತು ಲಕ್ಷ ಉಳಿಸಿದ್ದೀನಿ ಎಂದು. ಒಂದು ಘಳಿಗೆ ಮತ್ತೆ ಶುರುವಾಗಿತ್ತು ಮನದಲ್ಲಿ ತಲ್ಲಣ! ಛೆ, ನನಗೆ ಅವಕಾಶವಿದ್ದರೂ ಹೊಗಲಾಗುತ್ತಿಲ್ಲವಲ್ಲ!


ಹಾಗೆಯೆ, ಮೊನ್ನೆ ನನ್ನ ಬಾಸ್ ಹೇಳುತ್ತಿದ್ದ, "ಆಗಸ್ಟ್ ನಲ್ಲಿ, ಯಾರಾದರು ಒಬ್ಬರು ಲಂಡನ್ ಗೆ ಮತ್ತೆ ಹೊಗಬೇಕಾಗಬಹುದು" ಅಂತ. "ಮೊಹನ ಮುರಳಿ" ಮತ್ತೆ ಕರೆದಂತಾಗುತ್ತಿದೆ!