"ಆವರಣ" ವನ್ನು ಓದಿದ್ದು ಸುಮಾರು ಒಂದು ವರ್ಷದ ಹಿಂದೆ. ಓದಿದ ಕೆಲವೇ ದಿವಸಗಳ ನಂತರ ಈ ಲೇಖನವನ್ನು ಬರೆದಿದ್ದೆ. ಆದರೆ ಇದುವರೆಗೂ ಇದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅವಕಾಶ ಒದಗಿರಲಿಲ್ಲ. ಈಗ ಇ ಬ್ಲಾಗ್ ನಲ್ಲಿ ಹಂಚಿಕೊಳ್ಳುತ್ತಿದ್ದೇನೆ. ತಮ್ಮ ಅನಿಸಿಕೆಗಳಿಗೆ ಸ್ವಾಗತ.
=====
"ಸತ್ಯಶೋಧನೆಯಲ್ಲಿ ಓದುಗನೂ ಲೇಖಕನಷ್ಟೇ ಪಾಲುದಾರ. ಪಾತ್ರಗಳನ್ನಾಗಲಿ ಸನ್ನಿವೇಶಗಳನ್ನಾಗಲಿ ಸತ್ಯದ, ಕಲಾಸತ್ಯದ, ವಸ್ತುನಿಷ್ಠೆಯಿಂದ ಗ್ರಹಿಸಿ ಅವುಗಳ ಭಾವವನ್ನು ಆಸ್ವಾದಿಸಬೇಕೇ ಹೊರತು ವೈಯಕ್ತಿಕ ರಾಗ ದ್ವೇಷಗಳಿಂದ ಉದ್ರೇಕಗೊಳ್ಳಬಾರದು. ಹಿಂದಿನವರು ಮಾಡಿದ ತಪ್ಪುಗಳಿಗೆ ಇಂದಿನವರು ಜವಾಬ್ದಾರರಲ್ಲ; ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ತಾವು ಅವರ ವಾರಸುದಾರರಾಗಬೇಕೆಂಬ ರಾಗಕ್ಕೆ ಸಿಕ್ಕಿಕೊಂಡರೆ ಹಿಂದಿನವರ ತಪ್ಪಿನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ನಮ್ಮ ಪೂರ್ವಿಕರ ಯಾವ ಯಾವ ಕೃತ್ಯಗಳನ್ನು ನಾವು ತಿರಸ್ಕರಿಸಬೇಕು, ಯಾವ ಯಾವ ಸಾಧನೆಗಳಿಂದ ಸ್ಫೂರ್ತಿಪಡೆಯಬೇಕು ಎಂಬ ವಿವೇಚನೆ ಇಲ್ಲದಿದ್ದರೆ ನಾವು ಪ್ರೌಢರಾಗುವುದಿಲ್ಲ. ಇತಿಹಾಸದಿಂದ ಪಡೆಯುವಂತೆ ಬಿಡಿಸಿಕೊಳ್ಳುವುದೂ ಪಕ್ವತೆಯ ಗುರುತು. ಇದು ಪ್ರತಿಯೊಂದು ಧರ್ಮ, ಜಾತಿ, ವರ್ಗದವರಿಗೂ ಅನ್ವಯಿಸುವ ಮಾತು."
ಭೈರಪ್ಪನವರ ಆವರಣ ಕಾದಂಬರಿಯು ಮುನ್ನುಡಿಯಲ್ಲಿನ ಈ ಮೇಲಿನ ಮಾತುಗಳೊಂದಿಗೆ ಆರಂಭವಾಗುತ್ತದೆ. ಆವರಣದ ಕಥಾವಸ್ತು, ಪಾತ್ರ ಮತ್ತು ಸನ್ನಿವೇಶಗಳನ್ನು ಅವರ ಈ ಮೇಲಿನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಆಸ್ವಾದಿಸಬೇಕಾಗುತ್ತದೆ.
ಭೈರಪ್ಪನವರು ಮುನ್ನಿಡಿಯಲ್ಲಿ ಹೇಳಿರುವಂತೆ, ಇಲ್ಲಿ ನಾವು ಮೂಲತಃ ಎರಡು ಪ್ರಶ್ನೆಗಳನ್ನು ಇಟ್ಟುಕೊಂಡು ಕಾದಂಬರಿಯನ್ನು ಅವಲೋಕಿಸಬೇಕಾಗುತ್ತದೆ. ಮೊದಲನೆಯದಾಗಿ, ಸಾಹಿತ್ಯಿಕ ಕಲೆಯನ್ನು ಇತಿಹಾಸದ ಸತ್ಯದ ಕುರಿತು ರಚಿಸುವಾಗ, ಸತ್ಯದ ಬಗೆಗೆ ಸಾಹಿತಿಗೆ ಇರಬೇಕಾದ ಜವಾಬ್ದಾರಿಯೇನು? ಸಾಹಿತ್ಯಿಕ ಕೃತಿಯಲ್ಲಿ ಐತಿಹಾಸಿಕ ವ್ಯಕ್ತಿಗಳನ್ನು ವಿಜ್ರಂಭಿಸಿಯೋ ಅಥವಾ ಹೀಯಾಳಿಸಿಯೋ ಸೃಷ್ಟಿಸಿದಾಗ ಓದುಗನು ಕಾಲ್ಪನಿಕ ಕಥೆಯನ್ನೇ ಸತ್ಯವೆಂದು ನಂಬಿ ದಾರಿತಪ್ಪುವ ಸಾಧ್ಯತೆಗಳು ಅಸಂಖ್ಯ. ಈ ನಿಟ್ಟಿನಲ್ಲಿ ಆವರಣ ಕಾದಂಬರಿಯು ಸೌಂದರ್ಯಕ್ಕಿಂತ ಸತ್ಯಕ್ಕೆ ಹೆಚ್ಚು ಎರವಾಗಿ ನಿಲ್ಲುತ್ತದೆ. ಕಾದಂಬರಿಯನ್ನು ಓದಿದ ಯಾರಿಗಾದರೂ ಕೆಲವು ಪ್ರಶ್ನೆಗಳು ಕಾಡೇ ಕಾಡುತ್ತವೆ. ಕಾದಂಬರಿಯಲ್ಲಿ ಬರುವ ಅನೇಕ ಪ್ರಮುಖ ಪಾತ್ರಗಳಿಗೇಕೆ ಸರಿಯಾದ ಅಂತ್ಯ ತೋರಿಸಿಲ್ಲ? ಕಾದಂಬರಿಯನ್ನು ಅವಸರದಲ್ಲಿ ಮುಗಿಸಿದ್ದಾರಲ್ಲವೆ? ಎಂದು. ಈ ಪ್ರಶ್ನೆಗಳನ್ನು ಸತ್ಯ ಮತ್ತು ಸೌಂದರ್ಯಗಳ ಸಂಘರ್ಷದ ಹಿನ್ನೆಲೆಯಲ್ಲಿ ನೋಡಿದಾಗ ನಾವು ಸರಿಯಾದ ಉತ್ತರಗಳನ್ನು ಕಾಣಬಹುದು. ಉದಾಹರಣೆಗೆ, ಭೈರಪ್ಪನವರೇ ಹೇಳುವಂತೆ, ಕಾದಂಬರಿಯಲ್ಲಿ ಬರುವ ಖ್ವಾಜಾಜಹಾನನ ಪಾತ್ರದಿಂದ ಔರಂಗಜೇಬನನ್ನು ಕೊಲ್ಲಿಸಿ, ಆ ಪಾತ್ರಕ್ಕೊಂದು ರೋಚಕ ಹಾಗೂ ಸಾಹಸಿಕ ಅಂತ್ಯವನ್ನು ಕಾಣಿಸಬಹುದಾಗಿತ್ತು. ಅಥವಾ ಕಥೆಯನ್ನು ಇನ್ನೂ ಮುಂದುವರಿಸಿ, ಅವನು ಛತ್ರಪಾಲ ರಾಜನೊಡನೆ ಹೋಗಿ ಸೇರುವ ನಂತರ ಔರಂಗಜೇಬ ಹಾಗೂ ಅವನನ್ನು ಅದುವರೆಗೆ ಅನೇಕ ರೀತಿಯಲ್ಲಿ ಹಿಂಸಿಸಿದ ಮನ್‌ಸಬ್‌ದಾರರ ಮೇಲೆ ಅವನು ಸೇಡು ತೀರಿಸಿಕೊಳ್ಳುವಂತೆ ಚಿತ್ರಿಸಿ ಒಂದು ರೋಚಕ ಅಂತ್ಯವನ್ನು ಕೊಡಬಹುದಿತ್ತು. ಆದರೆ, ಹಾಗೆ ಮಾಡಿದ್ದಾಗ ಕಾದಂಬರಿಯು ಐತಿಹಾಸಿಕ ಸತ್ಯಕ್ಕೆ ಅಪಚಾರವೆಸಗಿದಂತಾಗುತ್ತಿತ್ತು. ಏಕೆಂದರೆ, ಇತಿಹಾಸವೇ ಹೇಳುವಂತೆ, ಔರಂಗಜೇಬನು ಕಾಶಿಯ ಮಂದಿರಗಳನ್ನು ನಾಶಮಾಡಿದ ನಂತರವೂ ಮೂವತ್ತೆಂಟು ವರ್ಷ ಬದುಕಿದ್ದನಂತೆ.
ಇನ್ನು ಕಾದಂಬರಿಯನ್ನು ಅವಸರವಾಗಿ ಮುಗಿಸಿದ್ದಾರೆ ಎನ್ನುವುದು. ಕೊನೆಗೆ ಎಲ್ರೂ ಸುಖವಾಗಿದ್ರು. . . ಎನ್ನುವಂತಹ ಅಡುಗೂಲಜ್ಜಿಯ ಕಥೆಗಳಿಗೆ ಹೊಂದಿಕೊಂಡಂಥವರಿಗೆ, ಭೈರಪ್ಪನವರ ಈ ಶೈಲಿ ಕೊಂಚ ಇರುಸು ಮುರುಸು ಉಂಟು ಮಾಡುವುದು ಸಹಜ. ಇಲ್ಲಿ ಕಾದಂಬರಿಯ ಮೂಲ ಪ್ರಶ್ನೆ ಸುಳ್ಳಿನ ತಳಹದಿಯ ಮೇಲೆ ಗಟ್ಟಿ ಸಮಾಜವನ್ನು ಕಟ್ಟುವುದು ಸಾಧ್ಯವೇ ಎನ್ನುವುದೇ ಹೊರತು ಕಾದಂಬರಿಯ ಪಾತ್ರಗಳು ಅಳಿದವೇ, ಉಳಿದವೇ ಎನ್ನುವುದಲ್ಲ. ಇಲ್ಲಿ, ಕಾದಂಬರಿಯನ್ನು ಓದಿದ ನಂತರವೂ ಓದುಗನ ಮನಸ್ಸನ್ನು ಈ ಪ್ರಶ್ನೆಯಿಂದ ಆವರಿಸಿಕೊಳ್ಳುವುದೇ ಕಾದಂಬರಿಕಾರರ ಉದ್ದೇಶ. ಈ ನಿಟ್ಟಿನಲ್ಲಿ ಕಾದಂಬರಿಯ ಪಾತ್ರಗಳಿಗೆ ಯಾವುದೇ ರೀತಿಯ ಅಂತ್ಯವನ್ನು ಕೊಡದೇ ಇರುವುದು ಸಾಹಿತ್ಯದ ಒಂದು ತಂತ್ರವೇ ಹೊರತು ಅವಸರದ ಮುಕ್ತಾಯವಲ್ಲ.
ಇರಲಿ...
ಇನ್ನು, ಕಾದಂಬರಿಯ ಅವಲೋಕನ ಮಾಡುವಾಗ, ನಾವು ಕೇಳಿಕೊಳ್ಳಬೇಕಾದ ಎರಡನೆಯ ಪ್ರಶ್ನೆಯೆಂದರೆ, ಸುಳ್ಳಿನ ತಳಹದಿಯ ಮೇಲೆ ಗಟ್ಟಿ ಸಮಾಜವನ್ನು ಕಟ್ಟುವುದು ಸಾಧ್ಯವೆ? ಎಂಬುದು. ಮೇಲೆ ತಿಳಿಸಿದ ಹಾಗೆ, ಇದು ಕಾದಂಬರಿಯ ಮೂಲ ಪ್ರಶ್ನೆಯೂ ಹೌದು.
ಮೊದಲು ಕಾದಂಬರಿಯಲ್ಲಿ ಬರುವ ಪಾತ್ರಗಳತ್ತ ಸ್ವಲ್ಪ ನೋಡೋಣ. ಕಾದಂಬರಿಯ ಪ್ರಮುಖ ಪಾತ್ರ ಲಕ್ಷ್ಮಿ ಉರ್ಫ್ ರಜಿಯಾಳನ್ನು ಮೂಲತಃ ಹಿಂದೂ ಧರ್ಮದ ಸಾಂಕೇತಿಕ ಚಿನ್ಹೆ (symbol) ಎಂದೇ ಭಾವಿಸಬಹುದು. ಅಮೀರನ ಪಾತ್ರವನ್ನು ಇಡೀ ಮುಸ್ಲಿಂ ಧರ್ಮದ ಚಿನ್ಹೆ (icon) ಎಂದುಕೊಳ್ಳಬಹುದು. ಇಲ್ಲಿ ಲಕ್ಷ್ಮಿ ಪ್ರೀತಿಯ ಮೋಹಕ್ಕೊ, ಕಾಮಕ್ಕೊ ಸಿಲುಕಿ ತನ್ನ ಧರ್ಮವನ್ನು ತ್ಯಜಿಸಿ ಮುಸ್ಲಿಂ ಧರ್ಮವನ್ನು ಸೇರುತ್ತಾಳೆ. ಒಂದು ರೀತಿಯಲ್ಲಿ ತನ್ನ ತನವನ್ನು ಕಳೆದುಕೊಳ್ಳುತ್ತಾಳೆ ಎಂದು ಅರ್ಥೈಸಬಹುದು. ಆದರೆ ನಂತರ ತನ್ನ ತಂದೆಯ ಸಂಶೋಧನೆಗಳಿಂದ ಪ್ರಭಾವಿತಳಾಗಿ ತನ್ನತನವನ್ನು ಮರಳಿ ಪಡೆಯುತ್ತಾಳೆ.
ಹಾಗೆ ನೋಡಿದರೆ, ಇಂದಿನ ಹಿಂದೂ ಧರ್ಮದ ಸ್ಥಿತಿಯೂ ಲಕ್ಷ್ಮಿಯ ಸ್ಥಿತಿಗಿಂತ ಭಿನ್ನವಾಗಿಲ್ಲವಲ್ಲವೆ? ಪರಧರ್ಮ ಸಹಿಷ್ಣುತೆ ಎಂಬ ತಾತ್ವಿಕ ನಿಲುವಿನ ಎಳೆದಾಟ, ಪರಧರ್ಮಗಳ ದಬ್ಬಾಳಿಕೆ, ನಮ್ಮವರ ಅಂಜುಗುಳಿತನ, ರಾಜಕೀಯ ದುರಾಸೆ, ಸ್ವಹಿತಾಸಕ್ತಿಗಳಿಂದ ತುಕ್ಕು ಹಿಡಿದ ಹಿಂದೂ ಧರ್ಮ ನಮ್ಮ ಪುರಾತನ ಸಂಸ್ಕೃತಿಯಿಂದ ತನ್ನತನವನ್ನು ಮರಳಿ ಪಡೆಯಬೇಕಾಗಿದೆ.
ಅದೇ ರೀತಿ ಅಮೀರ ಪ್ರತಿನಿಧಿಸುವ ಮುಸ್ಲಿಂ ಧರ್ಮ, ಆಧುನಿಕತೆಯ ಪ್ರಭಾವದಿಂದ ಹಿಂದಿನ ಅನೇಕ ಅನಾಚಾರ, ಅವೈಜ್ನಾನಿಕ ಆಚಾರಗಳನ್ನು ತೊರೆದಿದ್ದರೂ ಕೂಡಾ, ಅವುಗಳ ಪ್ರಭಾವದಿಂದ ಸಂಪೂರ್ಣ ಮುಕ್ತಿಹೊಂದದೆ, ಐತಿಹಾಸಿಕ ಸತ್ಯಗಳನ್ನು ಸ್ವೀಕರಿಸಿ ಅದರಿಂದ ಪಾಠ ಕಲಿಯದೆ, ಸ್ವತಃ ತಾನೂ ನರಳಿ ಇತರರನ್ನೂ ನರಳಿಸುತ್ತಿದೆ. ಕಾದಂಬರಿಯ ಕೊನೆಯಲ್ಲಿ ಆಗುವಂತೆ, ಅಮೀರ ತನ್ನ ತಪ್ಪುಗಳನ್ನು, ಐತಿಹಾಸಿಕ ಸತ್ಯವನ್ನು ಒಪ್ಪಿಕೊಂಡು ರಜಿಯಾಳನ್ನು ಸೌಹಾರ್ದತೆಯಿಂದ, ಪ್ರೀತಿಯಿಂದ ಕೂಡಿಕೊಳ್ಳುವುದೇ ಇಂದಿನ ಸಮಾಜದ ಅತ್ಯವಶ್ಯಕತೆ.ಒಬ್ಬ ಆರೋಗ್ಯವಂತ ಪುರುಷನ ವೃಷಣಗಳನ್ನು ಒಡೆದು ನಪುಂಸಕನನ್ನಾಗಿ ಮಾಡಿ, ಹೆಂಗಸರಂತೆ ಅವನನ್ನು ಕಾಮಕ್ರೀಡೆಗಳಿಗೆ ಉಪಯೋಗಿಸಿ, ಸ್ತ್ರೀಯರ ಸೇವೆಗಾಗಿ ಗುಲಾಮನನ್ನಾಗಿ ಬಳಸುವ ಹೀನ ಸಂಸ್ಕೃತಿ ನಮ್ಮ ದೇಶದಲ್ಲಿ ಇತ್ತೆಂದರೆ ಅದರಂತಹ ನಾಚಿಕೆಗೇಡಿನ ವಿಷಯ ಬೆರೊಂದಿಲ್ಲ. ಆದರೆ ಇಂತಹ ಸಂಸ್ಕೃತಿ ನಿರ್ಮಾಣವಾಗಿದ್ದು ಮತ್ತು ಚಾಲನೆಯಲ್ಲಿದ್ದುದು ಕೆಲವು ಮತಾಂಧ ವ್ಯಕ್ತಿಗಳಿಂದ ಹಾಗೂ ಅಂಥಹವರ ಬೋಧನೆಗಳಿಂದಲೇ ಎನ್ನುವುದು ಸಾರ್ವತ್ರಿಕ ಐತಿಹಾಸಿಕ ಸತ್ಯ. ಈ ಸತ್ಯಗಳ ತಳಹದಿಯ ಮೇಲೆಯೇ ಭಾವೀ ಭಾರತದ ನಿರ್ಮಾಣವಾಗಬೇಕೆ ಹೊರತು, ಅತಿಮಾನುಷವಾಗಿ ವಿಜ್ರಂಭಿಸಲಾಗಿರುವ ಟಿಪ್ಪೂ ಸುಲ್ತಾನ್‌ರಂತಹರ ಸ್ಪೂರ್ಥಿಯಿಂದಲ್ಲ. ನಮಗೆ ಬೇಕಾಗಿರಿವುದು ಅಕ್ಬರನ ಪರಧರ್ಮ ಸಹಿಷ್ಣುತೆಯೇ ಹೊರತು ಔರಂಗಜೇಬನ ಮತಾಂಧತೆಯಲ್ಲ.
ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತದಲ್ಲಿ ನಡೆದ ಅನೇಕ ಲೂಟಿ, ಸುಲಿಗೆ, ದರೋಡೆ, ಮತಾಂತರಗಳಿಗೆ ನಮ್ಮ ಅಜ್ಜಿ ತಾತಂದಿರೇ ಪ್ರತ್ಯಕ್ಷ ಸಾಕ್ಷಿಯಾಗಿರುವಾಗ, ಹಾಳು ಹಂಪೆ, ಪಾಳು ಕಾಶಿ, ಮಥುರೆಯ ಭಗ್ನಾವಷೇಶವಳೆ ಸತ್ಯವನ್ನು ಸಾರಿ ಸಾರಿ ಹೇಳುತ್ತಿರುವಾಗ, ಹಿಂದೆ ಏನು ನಡೆದೇ ಇಲ್ಲ ಎಂದು ಪ್ರತಿಪಾದಿಸುವುದು, ರಾಜಕೀಯ ಹಿತಾಸಕ್ತಿಗೋಸ್ಕರ ಸುಳ್ಳು ಇತಿಹಾಸವನ್ನು ಸೃಷ್ಟಿಸುವುದು ನಾಚಿಕೆಗೀಡಲ್ಲವೆ?
ಮುಸ್ಲಿಂ ಸಮಾಜದಲ್ಲಿ ಇಂದಿಗೂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಸಾಕ್ಷರತೆಯ ಪ್ರಮಾಣ ಶೇ ೩೦ ನ್ನೂ ದಾಟಿಲ್ಲ. ಶೇ ೭೦ ಕ್ಕೂ ಹೆಚ್ಚು ಜನರು ಬಡತನ ರೇಖೆಗಿಂತಲೂ ಕೆಳಗಿದ್ದಾರೆ. ಇಂತಹ ಅನೇಕ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿರುವಾಗ, ತಮ್ಮ ಇಮೇಜನು ವೃದ್ದಿಸುವದಕ್ಕಾಗಿ ಕ್ಷಣಕ್ಷಣಕ್ಕೆ ಮಾತು ಬದಲಿಸುತ್ತಾ, ಜನಮನ್ನಣೆಗೋಸ್ಕರ ಇತಿಹಾಸವನ್ನೇ ತಿರುಚುವ ಪ್ರೊಫೆಸರ್ ಶಾಸ್ತ್ರಿಯಂಥವರಿಗೆ, ಮುಸ್ಲಿಂ ಜನರ ಅನಕ್ಷರತೆಯನ್ನೇ ಓಟು ಬ್ಯಾಂಕಿನ ಬಂಡವಾಳವಾಗಿ ಬಳಸುವ ರಾಜಕೀಯ ಹಿತಾಸಕ್ತಿಗಳಿಗೆ ಅಂತಃಪ್ರಜ್ನೆಯೆನ್ನುವುದೇ ಇಲ್ಲವೆ?
ಅಷ್ಟಕ್ಕೂ, ಮುಸ್ಲಿಂ ಸಮಾಜದ ಕೆಳಸ್ಥರದಲ್ಲಿರುವ ಬಹುಪಾಲು ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಇತಿಹಾಸದ ಹಾಳು ಚಿಂತೆಯಾಗಲಿ, ಬೇರೆ ಮತದವರೊಂದಿಗೆ ಇಂತಹ ವಿಷಯದ ಬಗ್ಗೆ ಬಡಿದಾಡುವ ಶಕ್ತಿಯಾಗಲಿ ಇಲ್ಲವೇ ಇಲ್ಲ. ಇಂದಿಗೂ ಹಳ್ಳಿಗಳಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದು. ಅವರಲ್ಲಿರುವುದು ನೆರೆಹೊರೆಯಲ್ಲಿ ಒಂದಾಗಿ ಬದುಕುವ ಉತ್ಸಾಹ ಮತ್ತು ಹೊಂದಾಣಿಕೆಯೆ ಹೊರತು ದ್ವೇಶವಲ್ಲ.
ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಡೆಯುವ ಹುಸೇನ್‌ಸಾಬ್ ದರ್ಗಾದ ಉರುಸಿನಲ್ಲಿ ಸಕ್ಕರೆ ಊದಿಸಿಕೊಂಡು ಬರಲು ನಮ್ಮ ತಾಯಿ ನಮಗೆ ಹೇಳುತ್ತಿದಳು. ಅದೇ ರೀತಿ, ಸಂಕ್ರಾಂತಿಯ ದಿನ ನನ್ನ ಮುಸ್ಲಿಂ ಗೆಳೆಯರೂ ಕೂಡಾ ನಮ್ಮೊಂದಿಗೆ ಎಳ್ಳು ಬೆಲ್ಲ ಬೀರಿದ್ದು ನನಗಿನ್ನೂ ನೆನಪಿನಲ್ಲಿದೆ.
ಒಂದು ಸಮಾಜ ಅಥವಾ ಧರ್ಮ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕಂತೆ, ಆಧುನಿಕತೆಯೊಂದಿಗೆ ಬೆರೆತುಕೊಳ್ಳುವುದು ಅತ್ಯವಶ್ಯಕ. ಅಂತಹ ಒಂದು ಪ್ರಯತ್ನ ಸಮಾಜದ ಒಳಗಡೆ ಇರುವ ವ್ಯಕ್ತಿಗಳಿಂದ ಆದಗಲೇ ಅದಕ್ಕೆ ಹೆಚ್ಚು ಫಲಿತಾಂಶ ಸಿಗಲು ಸಾಧ್ಯ. ಉದಾಹರಣೆಗೆ, ಗಾಂಧೀಜಿಯನ್ನೊಳಗೊಂಡು ಅನೇಕ ವ್ಯಕ್ತಿಗಳು ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಶ್ರಮಿಸಿದರೂ ಕೂಡಾ ಅತೀ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದ್ದು ಅಂಬೇಡ್ಕರ್‌ರಿಗೆ ಮಾತ್ರ. ಇದಕ್ಕೆ ಕಾರಣ ಅವರು ಆ ಸಮಾಜದ ಒಳಗಿನಿಂದಲೇ ಅದರ ಉದ್ಧಾರಕ್ಕಾಗಿ ಶ್ರಮಿಸಿದ್ದು.
ಸಮಾಜ ಮತ್ತು ತನ್ಮೂಲಕ ಇಡೀ ದೇಶದ ಅಭಿವೃದ್ಧಿಯಾಗಬೇಕೆಂದರೆ, ನಾವು ಪ್ರಮುಖವಾಗಿ ಗಮನ ಕೊಡಬೇಕಾಗಿದ್ದು, ಮತ್ತು ಹೋರಾಡಬೇಕಾಗಿದ್ದು ಸಾಕ್ಷರತೆ, ಆರೋಗ್ಯ, ಆಹಾರಗಳಂತಹ ಮೂಲಭೂತ ಸೌಕರ್ಯಗಳಿಗೋಸ್ಕರವೇ ಹೊರತು ಇತಿಹಾಸದಲ್ಲಿ ಆಗಿಹೋದ ಅನಾಚಾರಗಳಿಗೆ ನಮ್ಮನ್ನು ನಾವು ಹೊಣೆಗಾರರನ್ನಾಗಿಸಿಕೊಂಡರೆ ಅದು ಅಪಕ್ವತೆಯ ಕುರುಹಾಗುತ್ತದೆ. ಅದೇ ರೀತಿ ಇತಿಹಾಸದಲ್ಲಿ ಹೀಗೆ ಆಗಿಯೇ ಇಲ್ಲವೆನ್ನುವುದೂ ಕೂಡಾ ಹೊಣೆಗೇಡಿತನವಾಗುತ್ತದೆ.
ಆವರಣ ಕಾದಂಬರಿಯೂ ಸಾರುವುದು ಮೇಲಿನ ವಿಚಾರವನ್ನೇ. ಕಾದಂಬರಿಯನ್ನು ಕೇವಲ ಸತ್ಯದ ಮತ್ತು ಅದು ಬಿಂಬಿಸುವ ಅಂತರಾರ್ಥದ ದೃಷ್ಠಿಯಿಂದ ನೋಡಬೇಕೇ ಹೊರತು, ಕೇವಲ ಮೇಲ್ನೋಟಕ್ಕೆ ಕಾಣುವ ಮತೀಯ ವಿಷಯದ ವಾಸನೆಯಿಂದಲೇ ಉದ್ರಿಕ್ತಗೊಳ್ಳಬಾರದು. ಈಗಾಗಲೇ ಈ ಕಾದಂಬರಿಯ ವಿರುದ್ಧ ಸೊಲ್ಲೆತ್ತಿರುವ ಅನೇಕ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಒಂದು ಎಚ್ಚರವಿರಲಿ. ಕಾದಂಬರಿಯ ರಚನೆಯ ಹಿಂದೆ ಅನೇಕ ವ್ಯಕ್ತಿಗಳ, ಅನೇಕ ವರ್ಷಗಳ ಸಂಶೋಧನೆಯ ಸಾಧನೆ ಇದೆ. ಈ ಕಾದಂಬರಿಯು ಇತಿಹಾಸದ ಬಗೆಗಿನ ಒಂದು ಆಕರ ಗ್ರಂಥ(Reference Book) ಆಗಬೇಕೇ ಹೊರತು ಇನ್ನೊಂದು ಮತೀಯ ಕಲಹದ ವಸ್ತುವಾಗದಿರಲಿ...