Saturday, July 26, 2008

ಜಿ. ಬಿ. ಜೋಷಿಯವರ ಒಂದು ಹಾಸ್ಯಮಯ ಸನ್ನಿವೇಶ

ಗಿರೀಶ್ ಕಾರ್ನಾಡ್ ರವರ "ಮದುವೆಯ ಆಲ್ಬಮ್" ನಾಟಕವನ್ನು ಓದುವಾಗ, ಅದರ ಮುನ್ನುಡಿಯಲ್ಲಿ ದಿ ಬಿ. ಜಿ. ಜೋಷಿ ಯವರ ಜೊತೆಗಿನ ಒಂದು ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಜೋಷಿಯವರ ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಭರಿತ ಮಾತುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಆತುರವಾಗುತ್ತಿದೆ.




ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಹಿನ್ನಲೆ ಬೇಕು. ಅದು ಹೀಗಿದೆ:ಬ್ರಾಹ್ಮಣರಲ್ಲಿ "ಗರುಡ ಪುರಾಣ" ಎನ್ನುವ ಒಂದು ಪುರಾಣವಿದೆ. ಅದರಲ್ಲಿ, ಮನುಷ್ಯ ಸತ್ತ ನಂತರ ಅವನು ಸ್ವರ್ಗ ಅಥವಾ ನರಕಕ್ಕೆ ಹೋಗುವದು, ಅಲ್ಲಿ ಚಿತ್ರಗುಪ್ತ ಎನ್ನುವನು ಇವನ ಕರ್ಮಾಕರ್ಮಗಳ ಬಗ್ಗೆ ವಿಚಾರಿಸಿ ಅವನನ್ನು ಸ್ವರ್ಗ ಅಥವಾ ನರಕಕ್ಕೆ ಕಳುಹಿಸುತ್ತಾನೆ. ಅದಕ್ಕೂ ಮುನ್ನ ಸತ್ತವನನ್ನು ಸ್ಮಶಾನಕ್ಕೆ ಒಯ್ಯುವಾಗ ಮನೆಯವರೆಲ್ಲ ಅಳುವುದು, ಮತ್ತೆ ’ಚಟ್ಟ’ ದ ಮೇಲೆ ಕರೆದು ಕೊಂಡು ಹೋಗುವುದು, ಇದನ್ನೆಲ್ಲ ಹಿನ್ನಲೆಯಾಗಿಟ್ಟುಕೊಂಡು ಕೆಳಗಿನ ಮಾತುಗಳನ್ನು ಓದಿ.



ಇಲ್ಲಿ ಜೋಷಿಯವರು ವಿಮಾನದಲ್ಲಿ ಬಾಂಬೆಯಿಂದ ಬೆಳಗಾವಿಗೆ ಬರುವ ಪ್ರಯಾಣವನ್ನು ಈ ರೀತಿ ಸತ್ತ ಮೇಲೆ ಆಗುವ ಘಟನೆಗಳಿಗೆ ಹೋಲಿಕೆ ಮಾಡಿ ಹಾಸ್ಯ ಭರಿತವಾಗಿ ಹೇಳುತ್ತಾರೆ. ಉಳಿದದ್ದನ್ನು ಅವರ ಮಾತುಗಲ್ಲಲ್ಲೇ ಕೇಳಿ. (ಕೆಳಗಿನ ಮಾತುಗಳನ್ನು ಗಿರೀಶ್ ಕಾರ್ನಾಡ್ ರವರು ಹೇಳುತ್ತಾರೆ):

ಅವರು ನನ್ನ 'ಒಂದಾನೊಂದು ಕಾಲದಲ್ಲಿ' ಚಿತ್ರಕ್ಕಾಗಿ ಸಂಭಾಷಣೆ ಬರೆಯಲು ಒಪ್ಪಿಕೊಂಡಾಗ ಮುಂಬೈನಲ್ಲಿದ್ದರು. ಅವರಿಗೂ ಹೊಸ ಅನುಭವ ಆಗಲಿ ಎಂದು ನಾನು 'ವಿಮಾನ ಪ್ರಯಾಣದಿಂದಲೇ ಬೆಳಗಾವಿಗೆ ಬನ್ನಿರಿ' ಎಂದು ತಿಳಿಸಿದೆ. ಆ ಪ್ರವಾಸವನ್ನು ಅವರು ಬಣ್ಣಿಸಿದ್ದು ಹೀಗೆ:



"ಗರುಡ ಪುರಾಣದೊಳಗೆ ಓದಿದ್ದೆಲ್ಲ ಅನುಭವಕ್ಕೆ ಬಂತು ನೋಡಪ್ಪ. ಮನಿಯಿಂದ ಹೊಂಟಾಗ ಹೆಣ್ಣು ಮಕ್ಕಳೆಲ್ಲಾ ಕಣ್ಣಿರು ಹಾಕೋದೇನು? ಮನೀ ಬಾಗಿಲತನಕ ಬಂದು ಕಣ್ಣು ಒರೆಸಿ ನೋಡತಿರತಾ ನಮ್ಮ ಗಾಡಿ ಹೊರದೊದೆನು? ಆ ಮ್ಯಾಲೆ ಜೊತೆಗೆ ಬರೆ ಗಂಡಸರು. ಅತ್ತಲಾಗ ಇಬ್ಬರು, ಇತ್ತಲಾಗ ಇಬ್ಬರು. ಅಗದಿ ಹೊತ್ತುಕೊಂಡು ಹೊಂಟ ಹಾಂಗ. ಏರ್ಪೋರ್ಟ್ ತಲುಪಿದರೆ ಅಲ್ಲಿವರೆಗೆ ಸಂಗತೀಲೆ ಬಂದವರು ಅಲ್ಲಿಂದ ಮುಂದೆ ಬರೂಹಂಗಿಲ್ಲ. ಮುಂದೆ ಹೋಗಲಾರದ, ಹೊಳ್ಳಿ ಹೋಗಲಾರದ ನಿಂತಿರತಾರ. ಮುಖದ ಮ್ಯಾಲೆ ಸ್ಮಶಾನ ಕಳೆ. ನಾ ಮುಂದೆ ಹೋದರೆ ಅಲ್ಲಿ ಒಬ್ಬಾವ ತಡದು ನಿಂದರಿಸಿ, ’ಏನು ತಂದೀ? ಕೈಯಾಗ ಏನು ಹಿಡದೀ? ಪರಭಾರೆ ಎಷ್ಟು ನಗ ಹೋದವು?’ ಅಂತ ಚಿತ್ರಗುಪ್ತನ ಹಾಂಗ ಯಾದಿ ಹಿಡಕೊಂಡು ನಿಂತಿರತಾನ. ಆವ ದಾರಿ ಬಿಟ್ಟರೆ ಮುಂದೆ ಬಳಸಿ ಬಳಸಿ ಹೋಗಿ ಒಂದು ಹಾಲ್. ಯಾವ ಗ್ವಾಡಿಗೂ ಬಾಗಿಲ ಕಿಡಕಿ ಇದ್ದಹಾಂಗೆ ಕಾಣಿಸಲಿಲ್ಲ. ಎಲ್ಲರ ಮಾರಿ ನಿರ್ವಿಕಾರ - ಪ್ರೇತಗಳ ಹಾಂಗೆ ಕೂತಿರತಾ. ಒಂದು ಆಕಾಶವಾಣಿ ಏನೋ ಘೋಷಣೆ ಮಾಡತದ. ಒಮ್ಮೆಲೆ ಒಂದು ಗುಂಪು ಏಳತದೆ, ಹೋಗತದೆ. ನರಕಕ್ಕೋ, ಸ್ವರ್ಗಕ್ಕೋ. ಕಳಿಸಿದಲ್ಲಿ ಹೋಗತಕ್ಕದ್ದು. ಕಡೀಕೊಮ್ಮೆ ನಮ್ಮ ಪಾಳಿ. ಬಾಗಿಲು ದಾಟಿ ಹೊರಗೆ ಹೋಗಿ ಮೆಟ್ಟಿಲು, ಮೆಟ್ಟಿಲು ಏರಿ ಕಣಿವೆಯ ಹಾಂಗೆ ಇರೋ ವಿಮಾನದಾಗ ಹೋಗಿ ಕೂಡಬೇಕು. ಇದೆಲ್ಲಿ ಒಯ್ಯತದ? ಗೊತ್ತಿಲ್ಲ. ಆದರೆ ಭೂಮಿ ಅಂತೂ ದೂರ ದೂರ ಹೋಧಾಂಗ, ನಾ ಸತ್ತ ಹೋಗೀನಿ ಅನ್ನೋದು ಖಾತ್ರಿ ಆತು!"



ಈ ವಿವರಣೆಯ ಅಂತ್ಯ ಕೂಡ ಥೇಟ್ ಜಿ. ಬಿ. ’ಇಷ್ಟೆಲ್ಲಾ ಆಗಿ ವಿಮಾನ ಹೀಂಗ ಕೆಳಗೆ ನೆಲಕ್ಕೆ ಇಳಿದು ಬಂತು ನೋಡು, ಥೂ! ಕುಂಡಿ ಹರದು ಹೋತು’

No comments: